
13th March 2025
ಮಲ್ಲಮ್ಮ ನುಡಿ ವಾರ್ತೆ
ಬಾಗಲಕೋಟೆ,ಮಾ.12-ಜಿಲ್ಲೆಯ ಬಾದಾಮಿ ತಾಲೂಕಿನ ಉಗಲವಾಟ ಗ್ರಾಮದಲ್ಲಿ ನಡೆದ ಕುರಿಗಾಹಿ ಶರಣಪ್ಪ ಜಮ್ಮನಕಟ್ಟಿ ಹತ್ಯೆ ಖಂಡಿಸಿ ಬಾಗಲಕೋಟೆಯಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಕುರಿಗಾರರು ಮತ್ತು ಪಶುಪಾಲಕರ ಹಿತರಕ್ಷಣಾ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಶರಣಪ್ಪನನ್ನು ಹತ್ಯೆ ಮಾಡಿರುವ ಕುರಿಗಳ್ಳ ಕೊಲೆಗಾರರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರಲ್ಲದೇ, ಕುರಿಗಾಹಿಗಳ ಮೇಲಾಗುವ ದೌರ್ಜನ್ಯ ತಡೆಗಟ್ಟುವ ಸಲುವಾಗಿ ಕುರಿಗಾಹಿಗಳ ಹಿತರಕ್ಷಣಾ ಕಾಯ್ದೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023-24 ರ ಬಜೆಟ್‌ನಲ್ಲಿ ಕುರಿಗಾಹಿಗಳ ರಕ್ಷಣೆಗೆ ಕಾಯ್ದೆ ಜಾರಿಗೆ ತರುವುದಾಗಿ ಹೇಳಿದ್ದರೂ ಈತನಕ ಅದು ಸಾಧ್ಯವಾಗಿಲ್ಲ. ಈಗಲಾದರೂ ಸಿದ್ದರಾಮಯ್ಯನವರು ಕಾಯ್ದೆ ಜಾರಿಗೊಳಿಸಲು ಮುಂದಾಗಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ಕೊಲೆಗೀಡಾದ ಶರಣಪ್ಪ ಜಮ್ಮನಕಟ್ಟಿ ಕುಟುಂಬಕ್ಕೆ ಸರಕಾರ ಆರ್ಥಿಕ ನೆರವು ನೀಡಬೇಕು ಎಂದರು.
ನಂತರ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಮನವಿ ಪತ್ರವನ್ನು ನೀಡಿದರು. ಪ್ರತಿಭಟನೆಯಲ್ಲಿ ಸಿದ್ದಪ್ಪ ಬಳಗಾನೂರ, ಪರಶುರಾಮ ಮಂಟೂರ, ಡಿ.ಬಿ.ಸಿದ್ದಾಪೂರ, ಮುತ್ತಪ್ಪ ಕೋಮಾರ, ವೀರಣ್ಣ ಹಳೇಗೌಡರ, ಮಲ್ಲು ವಡವಡಗಿ, ಶ್ರೀನಿವಾಸ ಬಳ್ಳಾರಿ, ರಾಮು ರಾಕುಂಪಿ, ಯಲ್ಲಪ್ಪ ಹೆಗಡೆ, ರಾಘು ಯಾದಗಿರಿ ಸೇರಿ ಅನೇಕ ಮುಖಂಡರು ಪಾಲ್ಗೊಂಡಿದ್ದರು.
ಕಲಬುರಗಿ ಜಿಲ್ಲೆಯಿಂದ ತಿರಂಗಾ ಯಾತ್ರೆ 23ಕ್ಕೆ ರಾಮೇಶ್ವರದಲ್ಲಿ ಅಮರ ಬಲಿದಾನ ದಿನಾಚರಣೆ